ಬೆಂಗಳೂರು : ಅಕ್ಟೋಬರ್ 31: ದ್ರಶ್ಯ ನ್ಯೂಸ್ :ಮುಖ್ಯಮಂತ್ರಿ ಸಿದ್ದರಾಮಯ್ಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಳಗಾವಿವರೆಗೂ ವಿಸ್ತರಿಸಿ ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಿನಿಂದ – ಹುಬ್ಬಳ್ಳಿ ಧಾರವಾಡ ತನಕ ಇರುವ ವಂದೇ ಭಾರತ್ ರೈಲು ಸಂಪರ್ಕ ಬೆಳಗಾವಿ ತನಕ ವಿಸ್ತರಣೆ ಮಾಡಬೇಕು. ವಂದೇ ಭಾರತ್ ರೈಲು ಸಂಪರ್ಕ ವಿಸ್ತರಣೆಯಿಂದ ಬೆಳಗಾವಿ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ. ಬೆಳಗಾವಿ ಜಿಲ್ಲೆಯತನಕ ವಿಸ್ತರಣೆ ಮಾಡಿದರೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಉತ್ತಮ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ. ಹೀಗಾಗಿ ವಂದೇ ಭಾರತ್ ರೈಲು ಸಂಪರ್ಕವನ್ನು ಹುಬ್ಬಳ್ಳಿ – ಧಾರವಾಡದಿಂದ ಬೆಳಗಾವಿ ತನಕ ವಿಸ್ತರಣೆ ಮಾಡಿದರೆ ಅನಕೂಲವಾಗಲಿದೆ ಎಂದು ಪತ್ರದ ಮುಖೇನ ಮನವಿ ಮಾಡಿದ್ದಾರೆ.
ಬೆಳಗಾವಿಯು ಕೈಗಾರಿಕೋದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಅನುಕೂಲಕರ ಪ್ರದೇಶವಾಗಿದೆ. ಬೆಳಗಾವಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ, ಅಲ್ಯೂಮಿನಿಯಂ ಮತ್ತು ಪ್ರಮುಖ ಕೈಗಾರಿಕೆಗಳನ್ನು ಹೊಂದಲಾಗಿದ್ದು, ಆರ್ಥಿಕವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿದೆ. ಇನ್ನು ಹಲವಾರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊರತುಪಡಿಸಿ ಆಟೋಮೊಬೈಲ್ ಮತ್ತು ಏರೋಸ್ಪೇಸ್ ಕೈಗಾರಿಕೆಗಳಿಗೂ ಈ ಜಿಲ್ಲೆ ಆಧಾರವಾಗಿದೆ. ಇನ್ನು ಇತರೆ ಮಾರ್ಗವನ್ನು ನೋಡುವುದಾದರೆ ಬೆಳಗಾವಿಯು ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಅತ್ಯುತ್ತಮ ಪ್ರವಾಸಿ ತಾಣವಾಗಿದೆ.
ಈ ಎಲ್ಲ ಕಾರಣಗಳಿಂದಾಗಿ ಬೆಂಗಳೂರು- ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿ ನಗರಕ್ಕೆ ವಿಸ್ತರಿಸಲು ನಾನು ನಿಮ್ಮನ್ನು ಕೋರುತ್ತೇನೆ. ಇದು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಸಂಪರ್ಕ ಸಾಧಿಸಲು ಗಮನಾರ್ಹ ಕೊಡುಗೆಯನ್ನು ನೀಡುತ್ತದೆ
ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರೂ ತಮಗೆ ಪತ್ರ ಬರೆದಿದ್ದಾರೆ. ಹೀಗಾಗಿ ಈ ಬಗ್ಗೆ ಗಮನಹರಿಸಿ ಅಗತ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಒತ್ತಾಯಿಸುತ್ತೇನೆ. ಸಕಾರಾತ್ಮಕ ಕ್ರಮಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪತ್ರದ ಮುಖೇನ ಕೋರಿದ್ದಾರೆ.