ಉಡುಪಿ: ಅಕ್ಟೋಬರ್: 31: ದೃಶ್ಯ ನ್ಯೂಸ್ : ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆ, ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜಿಲ್ಲೆಯಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲು ಉದ್ದೇಶಿಸಲಾಗಿರುತ್ತದೆ. ಆದ್ದರಿಂದ ನವೆಂಬರ್ 1 ರಂದು ಜಿಲ್ಲೆಯ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಕರ್ನಾಟಕ ಸಂಭ್ರಮ-50 “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಘೋಷ ವಾಕ್ಯವನ್ನು ಬರೆಯಬೇಕು.
ಅಂದು ಬೆಳಗ್ಗೆ 9 ಗಂಟೆಗೆ ಆಕಾಶವಾಣಿ ಕೇಂದ್ರಗಳಲ್ಲಿ (ರೇಡಿಯೊ) ನಾಡ ಗೀತೆಯನ್ನು ಪ್ರಸಾರ ಮಾಡಲಾಗುತ್ತಿದ್ದು, ಆ ಸಮಯದಲ್ಲಿ ಕನ್ನಡ ನಾಡಿನ ಎಲ್ಲಾ ನಾಗರಿಕರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಡಗೀತೆಗೂ ಗೌರವ ಸಲ್ಲಿಸಬೇಕು.
ಸಂಜೆ 5 ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮೈದಾನಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಿಸಬೇಕು. ಸಂಜೆ 7 ಗಂಟೆಗೆ ಎಲ್ಲಾ ಗ್ರಾಮಗಳ ಮನೆ, ಕಛೇರಿ ಹಾಗೂ ಅಂಗಡಿ ಮಳಿಗೆಗಳ ಮುಂದೆ ಹಣತೆ (ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿಯನ್ನು ಬೆಳಗಿಸಬೇಕು.
ಜಿಲ್ಲೆಯಲ್ಲಿ ನವಂಬರ್ 01 ರಂದು ಸಾರ್ವಜನಿಕರು ಮೇಲ್ಕಂಡ ಅಂಶಗಳನ್ನು ಅಳವಡಿಸಿಕೊಂಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.