💥ನಿತಿನ್ ಗಡ್ಕರಿ, ಜಿ ಪರಮೇಶ್ವರ್, ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿ
ಉಡುಪಿ: ಅಕ್ಟೋಬರ್: 27: ದೃಶ್ಯ ನ್ಯೂಸ್ : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಕ್ಟೋಬರ್ 28 ಹಾಗೂ 29ರಂದು ವಿಶ್ವ ಬಂಟರ ಸಮ್ಮೇಳನ-2023 ( ಕ್ರೀಡಾ ಸಂಗಮ ಮತ್ತು ಸಾಂಸ್ಕೃತಿಕ ಸಂಭ್ರಮ) ಉಡುಪಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ವಿಶ್ವ ಬಂಟರ ಸಮ್ಮೇಳನ ಉದ್ಘಾಟನೆಗಾಗಿ ಉಡುಪಿಗೆ ಆಗಮಿಸಲಿದ್ದಾರೆ.
ಅಕ್ಟೋಬರ್ 28ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿ ನಗರದ ಬೋರ್ಡ್ ಹೈಸ್ಕೂಲ್ ನಲ್ಲಿ ಬೃಹತ್ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಮೆರವಣಿಗೆಯು ನಗರಸಭೆ, ಹಳೆ ಡಯಾನ , ಬಿಗ್ ಬಜಾರ್ ಮೂಲಕ ಅಜ್ಜರಕಾಡು ಭುಜಂಗ ಪಾರ್ಕ್ ಮಾರ್ಗವಾಗಿ ಅಜ್ಜರಕಾಡು ಮೈದಾನವನ್ನು ಪ್ರವೇಶಿಸಲಿದೆ. ಈ ಅದ್ದೂರಿ ಮೆರವಣಿಗೆಯಲ್ಲಿ ವಿವಿಧ ಭಾಗಗಳ ಸುಮಾರು 62 ಕ್ಕೂ ಅಧಿಕ ಬಂಟರ ಸಂಘಗಳ 6,000-7,000 ಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಹಾಗೂ ವಿವಿಧ ಕಲಾ ತಂಡಗಳು, ಉಡುಪಿ ಕಡೆಗೋಲು ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ ಹೀಗೆ ವಿವಿಧ ಸ್ತಬ್ಧ ಚಿತ್ರಗಳು, ಕಂಬಳದ ಕೋಣಗಳು, ಕೇರಳದ ತೈಯ್ಯಂ, ಹುಲಿ ವೇಷ, ಕೀಲುಕುದುರೆ ಗೊಂಬೆಗಳು, ಹೊನ್ನಾವರ ಬ್ಯಾಂಡ್ ಸೆಟ್, ಅಗೋಳಿ ಮಂಜಣ್ಣನ ವೇಷಧಾರಿ, ಚೆಂಡೆ, ವಾದ್ಯ, ಡೋಲು, ನಾಗಸ್ವರ, ಬಣ್ಣದ ಕೊಡೆಗಳು ಹಾಗೂ ವಿವಿಧ ವಿನೋದಾವಳಿಗಳು ಮೆರವಣಿಗಯೆ ಮೆರುಗು ಹೆಚ್ಚಿಸಲಿವೆ.
ಆ ಬಳಿಕ ಅಜ್ಜರಕಾಡು ಮೈದಾನದಲ್ಲಿ ಎಲ್ಲ ಬಂಟರ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಲಿದ್ದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ವಿಶ್ವ ಬಂಟರ ಸಮ್ಮೇಳನವನ್ನು ಉದ್ಘಾಟಿಸಿ, ಇದೇ ಸಂದರ್ಭ ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದರು, ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಬಾರ್ಕೂರು ಬಾರ್ಗವ ಮಹಾಸಂಸ್ಥಾನದ ಶ್ರೀ ಡಾ. ವಿಶ್ವ ಸಂತೋಷ್ ಭಾರತಿ ಶ್ರೀಪಾದರು, ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಟೀಲು ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಲಕ್ಷ್ಮಿ ನಾರಾಯಣ ಅಸ್ರಣ್ಣರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ ಮತ್ತು ನೈನಿತಾ ಪ್ರವೀಣ್ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿರುವರು.