ಉಡುಪಿ, ಅಕ್ಟೋಬರ್ 27: ದೃಶ್ಯ ನ್ಯೂಸ್ : ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ನಡೆದ ಶ್ರೀ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಿದ್ದು, ಚೆನ್ನಮ್ಮರ ಹೋರಾಟದ ಮನೋಭಾವವು ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದರೊಂದಿಗೆ ಚೆನ್ನಮ್ಮರ ಶೌರ್ಯ ಸಾಹಸ, ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.
1857 ರ ಸ್ವಾತಂತ್ರ್ಯ ಸಂಗ್ರಾಮ/ ಸಿಪಾಯಿ ದಂಗೆಯ ಪೂರ್ವದಲ್ಲಿ ತನ್ನ ಕುಟುಂಬವನ್ನು ಕಳೆದುಕೊಂಡ ಸಂದರ್ಭದಲ್ಲಿಯೂ ಎದೆಗುಂದದೇ ರಾಜ್ಯದ ರಕ್ಷಣೆಗೆ ಪಣತೊಟ್ಟು ಬ್ರಿಟಿಷರ ವಿರುದ್ಧ ಹೋರಾಡಿ, ಬಂಧಿಸಲ್ಪಟ್ಟು ಬೈಲಹೊಂಗಲದ ಸೆರೆಮನೆಯಲಿದ್ದರು. ಸ್ಯಾತಂತ್ರ್ಯಕ್ಕಾಗಿ ಹೋರಾಡಿದ ಆಕೆಯ ಧೈರ್ಯ ಇಂದಿಗೂ ಅವಿಸ್ಮರಣೀಯ ಎಂದರು.
ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಉಪನ್ಯಾಸ ನೀಡಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನು ಮನ ವನ್ನು ಅರ್ಪಿಸಿದವರು ಕಿತ್ತೂರು ರಾಣಿ ಚೆನ್ನಮ್ಮ, ಚಿಕ್ಕಂದಿನಿoದಲೇ ಶಾಸ್ತ್ರಭ್ಯಾಸ ರಾಮಾಯಣ ಮಹಾಭಾರತ ಪುರಾಣಗಳ ಅಧ್ಯಯನ ಹಾಗೂ ಧಾರ್ಮಿಕ ವಿಚಾರಗಳು ಆಕೆಯನ್ನು ಕೆಚ್ಚೆದೆಯ ವೀರವನಿತೆಯನ್ನಾಗಿ ಮಾಡಿಸಿತು.
ಗಂಡನಿಗೆ ಮಾರ್ಗದರ್ಶಕಿಯಾಗಿ ರಾಜ್ಯದ ಆಡಳಿತದಲ್ಲಿ ಸದಾ ಬೆನ್ನೆಲುಬಾಗಿ ನಿಂತಿದ್ದಳು. ಗಂಡನ ಮರಣದ ನಂತರ ರಾಜ್ಯವನ್ನು ಮುನ್ನಡೆಸುತ್ತಿದ್ದಳು. ಮಕ್ಕಳಿಲ್ಲದ ಕಾರಣ ಶಿವಲಿಂಗ ಎಂಬ ಮಗುವನ್ನು ದತ್ತು ಪಡೆದಿದ್ದು, ಕೆಲವೇ ದಿನಗಳಲ್ಲಿ ಅನಾರೋಗ್ಯದ ಹಿನ್ನೆಲೆ, ಆತ ಮರಣ ಹೊಂದಿದಾಗ, ದತ್ತು ಮಗುವನ್ನು ಪಡೆದಿದ್ದ ವಿಚಾರ ಚೆನ್ನಮ್ಮ ಮುಚ್ಚಿಟ್ಟಿದ್ದಳು ಎಂಬ ಕಾರಣದಿಂದಾಗಿ ಬ್ರಿಟಿಷರು ಸಿಟ್ಟಿಗೆದ್ದು ಇವಳ ಸಾಮ್ರಾಜ್ಯದ ಮೇಲೆ ದಾಳಿ ನಡೆಸಿ, ಅವಳ ಖಜಾನೆಯಲ್ಲಿದ್ದ ಸಂಪತ್ತಿನ ಭಂಡಾರಕ್ಕೆ ಬೀಗ ಜಡಿದು, ಇಬ್ಬರು ಇಂಗ್ಲೀಷ್ ಅಧಿಕಾರಿಗಳನ್ನು ನೇಮಕ ಮಾಡಿದಾಗ, ಚೆನ್ನಮ್ಮ ಅವಮಾನ ಸಹಿಸಲಾರದೇ ಬ್ರಿಟಿಷರ ವಿರುದ್ಧ ಹೋರಾಡಲು ಸೈನಿಕರನ್ನು ಒಗ್ಗೂಡಿಸಿ, ಬ್ರಿಟಿಷರಿಂದ ನಾಡನ್ನು ಮುಕ್ತಗೊಳಿಸಬೇಕು ಎಂಬ ಪಣತೊಟ್ಟಿದ್ದಳು ಎಂದರು.
ಬ್ರಿಟಿಷರ ಹಣದಾಸೆಗೆ ಮರುಳಾಗಿ, ಗ್ರಾಮಗಳ ಜನರು ಕಿತ್ತೂರು ಸಾಮ್ರಾಜ್ಯದ ಗುಟ್ಟುಗಳನ್ನೆಲ್ಲಾ ಬಿಟುಕೊಟ್ಟು, ಮದ್ದಿನ ಭಂಡಾರಕ್ಕೆ ಬೆಂಕಿ ಹಚ್ಚುತ್ತಾರೆ. ಈ ಹೋರಾಟದಲ್ಲಿ ರಾಣಿ ಚೆನ್ನಮ್ಮ ಬಂಧಿಸಲ್ಪಡುತ್ತಾಳೆ. ಜೈಲಿನಿಂದ ಬಿಡುಗಡೆ ಸಾಧ್ಯವಿಲ್ಲವೆಂದು ಅರಿತ ಚೆನ್ನಮ್ಮ ತನ್ನನ್ನು ಸಂಪೂರ್ಣ ಆಧ್ಯಾತ್ಮದೆಡೆಗೆ ತೊಡಗಿಸಿಕೊಂಡು, ತನ್ನ ಬಳಿಯಿದ್ದ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡುತ್ತಾ 1829 ರಲ್ಲಿ ಕೊನೆಯುಸಿರೆಳೆಯುತ್ತಾಳೆ. ಇಂತಹ ನಿರಾಗ್ರಣಿಗಳ ದೇಶಪ್ರೇಮ, ಧೈರ್ಯ, ಸಾಹಸ, ಪರಾಕ್ರಮಗಳೂ ಇಂದಿಗೂ ಜನಜನಿತವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ನರಸಿಂಹ ಮೂರ್ತಿ, ಜಂಗಮ ಮಠದ ಗಿರೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಶಶಿಧರ್ ಕಾರ್ಯಕ್ರಮ ನಿರೂಪಿಸಿ, ಜಂಗಮ ಮಠದ ಡಾ. ನಿರಂಜನ ವಂದಿಸಿದರು.