ಉಡುಪಿ, ಅ. 25:ದ್ರಶ್ಯ ನ್ಯೂಸ್:ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ನಿರಂತರ ಜೋಡಿ ಚಂಡಿಕಾಯಾಗ, ದೀಪಾರಾಧನೆ ಸಹಿತ ರಂಗಪೂಜೆ, ವಿವಿಧೆಡೆಗಳ ಪ್ರಸಿದ್ಧ ಕಲಾವಿದರ ಸಾಂಸ್ಕೃತಿಕ ವೈಭವಗಳು ಹಾಗೂ ನೃತ್ಯೋತ್ಸವವು ವೈಭವದಿಂದ ನೆರವೇರಿತು.
ಸಾತ್ವಿಕ್ ಪ್ರಭು ಉಡುಪಿ ಮತ್ತು ಮುಂಬಯಿಯ ಶ್ರದ್ಧಾ ಅವರ ಸೇವಾರ್ಥವಾಗಿ ಜೋಡಿ ಚಂಡಿಕಾಯಾಗ ಸೋಮವಾರ ಸಮರ್ಪಿಸಲ್ಪಟ್ಟಿತು. ಬೆಂಗಳೂರಿನ ಅನಿಲ್ ಅವರ ಸೇವಾರ್ಥವಾಗಿ ಕಲ್ಪೋಕ್ತ ಸಹಿತ ದುರ್ಗಾನಮಸ್ಕಾರ ಪೂಜೆ ನಡೆಯಿತು.
ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿಯವರು ಸ್ವಸ್ತಿಕ್ ಆಚಾರ್ಯರ ಸಹಕಾರದೊಂದಿಗೆ ಶ್ರೀ ದೇವಿಯನ್ನು ಸಿದ್ಧಿಧಾತ್ರಿಯಾಗಿ ಅಲಂಕರಿಸಿದ್ದರು. ಅರ್ಚಕ ಅನೀಶ್ ಭಟ್ ಪೂಜಾ ವಿಧಿವಿಧಾನ ನಡೆಸಿದರು.
ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆಯನ್ನು ರಿದ್ದಿ, ಯಶಸ್ವಿನಿ, ಅನ್ನಪೂರ್ಣಿ, ಅಂಶಿಕಾ, ಅದ್ವಿತಾ, ಸುಫಲತಾ ದೇವಿ, ಹರಿಪ್ರಿಯಾ, ಮಣಿಪಾಲ ಎಂಐಟಿ ವಿದ್ಯಾಾರ್ಥಿ ಈಶಾನ್ ಕೌಂಡಿನ್ಯ ಹಾಗೂ ಪ್ರಸಿದ್ಧ ನೃತ್ಯ ಸಂಸ್ಥೆಗಳ ನೃತ್ಯಾರ್ಥಿಗಳು ದೇವಿಗೆ ಅಭಿಮುಖವಾಗಿ ಸಮರ್ಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ನವಶಕ್ತಿ ವೇದಿಕೆಯಲ್ಲಿ ಬೆಂಗಳೂರಿನ ಶಾಂತಲಾ ಆರ್ಟ್ಸ್ ಅಕಾಡೆಮಿಯ ಶ್ರವಣ್ ಯು.ಬಿ. ಅವರಿಂದ ನೃತ್ಯ ವೈವಿಧ್ಯ, ಕಾಸರಗೋಡು ದುರ್ಗಾ ಅಕಾಡೆಮಿಯ ಕಲಾವಿದರಿಂದ ಬೆಳಗ್ಗಿನಿಂದ ಸಂಜೆಯ ತನಕ ಸಾಂಸ್ಕೃತಿಕ ವೈಭವ ಜರಗಿತು.
ಗಾನ ನಾಟ್ಯ ಪ್ರಿಯಳಾದ ಶ್ರೀದೇವಿಗೆ ಈ ಬಾರಿ ಸೇವಾರ್ಥಿಗಳಿಂದ ನಾದ ಸೇವೆಯೂ ಸಮರ್ಪಿಸಲ್ಪಟ್ಟಿತು. ವಿ ನಿಕ್ಷಿತ್ ಪುತ್ತೂರು ಅವರಿಂದ ಮೃದಂಗ ವಾದನ, ಅದಿತಿ ಮತ್ತು ಮಹತಿ ಅವರಿಂದ ವಯೋಲಿನ್ ವಾದನ, ನಿರೀಕ್ಷಾ ಅವರಿಂದ ವೀಣಾ ವಾದನ, ವಿಜಯ ಶೇರಿಗಾರ್ ಅವರಿಂದ ಸ್ಯಾಕ್ಸೋಫೋನ್ ವಾದನ, ಮುರಳೀಧರ ಮುದ್ರಾಡಿ ಅವರಿಂದ ನಾದಸ್ವರ, ವಿವಿಧ ಸಿಂಗಾರಿ ಮೇಳಗಳಿಂದ ಚೆಂಡೆ ವಾದನ ಹಾಗೂ ವಿವಿಧ ಭಜನ ಮಂಡಳಿಯಿಂದ ಕುಣಿತ ಭಜನೆ ಜರಗಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
ಪ್ರತ್ಯಕ್ಷ ರಾಜೋಪಚಾರ ಪೂಜೆ
ನೃತ್ಯ, ಗೀತಾ, ಸ್ತೋತ್ರ, ವಾದ್ಯ, ವಾಹನಾದಿಗಳು ರಾಜೋಪಚಾರ ಪೂಜೆ ಎನಿಸಲ್ಪಡುತ್ತವೆ. ವೇದ ಕಾಲದಿಂದಲೇ ಸೃಷ್ಟಿಯಾದ ರಾಜೋಪಚಾರ ಪೂಜೆಗಳು ಬಹುತೇಕ ಕಡೆಗಳಲ್ಲಿ ಮಂತ್ರೋಚ್ಛಾರಗಳಿಂದ ನಡೆದರೆ ಈ ಕ್ಷೇತ್ರದಲ್ಲಿ ‘ಪ್ರತ್ಯಕ್ಷ ರಾಜೋಪಚಾರ ಪೂಜೆ’ಯಾಗಿ ಸಮರ್ಪಿಸಲ್ಪಡುತ್ತಿದೆ. ಕಲಿಯುಗದಲ್ಲಿ ದೇವರನ್ನು ಮುದಗೊಳಿಸಲು, ಸಂಪ್ರೀತಿಗೊಳಿಸಲು ಇರುವ ಸುಲಭವಾದ ಸಾಧನವಾಗಿ ಇದು ಪರಿಗಣಿಸಲ್ಪಟ್ಟಿದೆ.
ಕಲಾವಿದರು ತಮ್ಮ ಕಲಾ ಸಾಧನೆ ಮತ್ತು ಯಶಸ್ಸಿಗಾಗಿ ಕ್ಷೇತ್ರಕ್ಕೆ ಬಂದು ಸೇವೆ ಸಲ್ಲಿಸಿ ಬದುಕಿನಲ್ಲಿ ಮನದಿಚ್ಛೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ ಎಂದು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ತಿಳಿಸಿದ್ದಾರೆ.