ಉಡುಪಿ: ಅಕ್ಟೋಬರ್: 21: ದೃಶ್ಯ ನ್ಯೂಸ್ : ಹಿರಿಯಡ್ಕ ಕಡೆಗೆ ಹೋಗಲು ಕಾಜರಗುತ್ತು, ಜೈಲ್ ರೋಡ್‌ನಲ್ಲಿ ಮಾರ್ಗ ಮಧ್ಯೆ ಕಲ್ಲಂಬೆಟ್ಟು ಸೇತುವೆ ಬಳಿ ಬೈಕ್ ನಿಲ್ಲಿಸಿ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಹಿಂಬದಿಯಿಂದ ನಡೆದು ಬಂದು ಸವಾರನನ್ನು ತಳ್ಳಿ ಪಲ್ಸರ್ ಬೈಕ್ ಸುಲಿಗೆ ಮಾಡಿದ ಪ್ರಕರಣದ ಆರೋಪಿಯನ್ನು ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ಸಿಪಿಐ ದಿವಾಕರ್ ಪಿ.ಎಂ ತಂಡದವರು ಒಂದೇ ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಕಾಪು ತಾಲೂಕು ಮಲ್ಲಾರು ನಿವಾಸಿ ಸೂರಜ್ ಕೋಟ್ಯಾನ್ (31) ಎನ್ನುವಾತನನ್ನು ತನಿಖಾ ತಂಡ ಬಂಧಿಸಿದ್ದು ಈತನಿಂದ ಸುಲಿಗೆ ಮಾಡಿದ ಬೈಕ್ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಡಬೆಟ್ಟು ಗ್ರಾಮದ ಸಂದೀಪ ನಾಯ್ಕ್ ಎನ್ನುವರು ತಮ್ಮ ಪಲ್ಸರ್ ಮೋಟಾರ್‌ಸೈಕಲ್‌ನಲ್ಲಿ ಹಿರಿಯಡ್ಕ ಕಡೆಗೆ ಕಾಜರಗುತ್ತು ಜೈಲ್ ರೋಡ್‌ನಲ್ಲಿ ಹೋಗುತ್ತಿದ್ದಾಗ ಕಲ್ಲಂಬೆಟ್ಟು ಸೇತುವೆ ಬಳಿ ಮೋಟಾರ್‌ಸೈಕಲ್ ನಿಲ್ಲಿಸಿ ಫೋನ್‌ನಲ್ಲಿ ಮಾತನಾಡುತ್ತಿದ್ದು ಸಂಜೆ 4.45 ಗಂಟೆಗೆ ಹಿರಿಯಡ್ಕ ಜಿಲ್ಲಾ ಕಾರಾಗೃಹದ ಕಡೆಯಿಂದ ಹಿಂಬದಿಯಿಂದ ನಡೆದುಕೊಂಡು ಬಂದವರು ಸಂದೀಪ ನಾಯ್ಕ ಅವರನ್ನು ಕೈಯಿಂದ ದೂಡಿ ಸುಮಾರು 25 ಸಾವಿರ ರೂ. ಮೌಲ್ಯದ ಪಲ್ಸರ್ ಬೈಕ್‌ನ್ನು ಸುಲಿಗೆ ಮಾಡಿದ್ದು ಈ ಬಗ್ಗೆ ಹಿರಿಯಡ್ಕ ಪೊಲೀಸ್ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯಡಕ ಪೊಲೀಸ್ ಠಾಣಾ ಠಾಣಾಧಿಕಾರಿ, ಸಿಬ್ಬಂದಿಗಳು ಪ್ರಕರಣ ದಾಖಲಾದ ಒಂದೆ ದಿನದಲ್ಲಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ದಿನಕರ್ ಪಿ.ಕೆ., ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್.ಪಿ.ಎಂ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣಾ ಪಿಎಸ್‌ಐ ಮಂಜುನಾಥ ಮರಬದ, ಹಿರಿಯಡಕ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.